ಹೈದರಾಬಾದ್
	ಭಾರತದ ಆಂಧ್ರಪ್ರದೇಶ ರಾಜ್ಯದ ಒಂದು ಜಿಲ್ಲೆ ಮತ್ತು ರಾಜ್ಯಾಡಳಿತ ಕೇಂದ್ರ ಮಹಾನಗರ. ಜನಸಂಖ್ಯೆ 36,86,460.

	ಹೈದರಾಬಾದ್ ನಗರ ಆಗ್ನೇಯ ದಿಕ್ಕಿನಲ್ಲಿರುವ ಚೆನೈಯಿಂದ 500 ಕಿಮೀ ದೂರದಲ್ಲೂ ವಾಯವ್ಯದಿಕ್ಕಿನಲ್ಲಿರುವ ಮುಂಬೈನಿಂದ 600 ಕಿಮೀ ದೂರದಲ್ಲೂ ಇದೆ. ಹಳೆಯ ಹೈದರಾಬಾದ್ ನಗರ ಮೂಸೀ ನದಿಯ ಎರಡೂ ದಂಡೆಗಳ ಮೇಲೆ ಬೆಳೆದಿದೆ. ಹೈದರಾಬಾದ್‍ನ ಉತ್ತರಕ್ಕಿರುವ ಸಿಕಂದರಾಬಾದ್‍ನಗರ ಅವಳಿ ಪಟ್ಟಣವಾಗಿದ್ದು, ಹುಸೇನ್ ಸಾಗರ ತೀರದಲ್ಲಿದೆ. ಗೋಲ್ಕೊಂಡ ರಾಜವಂಶದ 5ನೆಯ ದೊರೆಯಾದ ಸುಲ್ತಾನ್ ಮಹಮದ್ ಕ್ವಾಲಿ 1589ರಲ್ಲಿ ಹೈದರಾಬಾದ್ ಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡನು.

	ಹೈದರಾಬಾದ್ ನಗರಕ್ಕೆ ಹಿಂದೆ ಅನೇಕ ವಿದ್ವಾಂಸರು, ಕಲೆಗಾರರು, ಕವಿಗಳು ಚೀನ, ಮಧ್ಯಪ್ರಾಚ್ಯ ಪರ್ಷಿಯ, ರಷ್ಯ ಮತ್ತು ಪಶ್ಚಿಮ ಯುರೋಪ್ ದೇಶಗಳಿಂದ ಬರುತ್ತಿದ್ದರು. 1687ರಲ್ಲಿ ಮೊಗಲರ ಆಳಿಕೆಯಿಂದಾಗಿ ತನ್ನ ಹಳೆಯ ವೈಭವವನ್ನು ಈ ನಗರ ಕಳೆದುಕೊಂಡಿತ್ತು. 1947ರಲ್ಲಿ ಬ್ರಿಟಿಷರು ನಿಜಾಮ್ ದೊರೆಗಳಿಗೆ ಹೈದರಾಬಾದಿನ ಆಡಳಿತವನ್ನು ವಹಿಸಿದ ಮೇಲೆ ಇದು ತನ್ನದೇ ಆದ ಹೊಸ ಸ್ವರೂಪವನ್ನು ಪಡೆಯಿತು.

	ಇಲ್ಲಿ ಅತ್ಯಂತ ಪುರಾತನವಾದ ಕಟ್ಟಡಗಳು ಇವೆ. ಮುಖ್ಯವಾಗಿ ಹಳೆಯ ಹೈದರಾಬಾದ್ ನಲ್ಲಿ ಕಂಡುಬರುವ ಬೃಹತ್ ಕಮಾನಿನ ಬಾಗಿಲಿಗೆ ಚಾರ್‍ಮಿನಾರ್‍ನ್ನು ಮಹ್ಮದ್‍ಕ್ವಾಲಿ ಕುತುಬ್‍ಷಾ 1591ರಲ್ಲಿ ಪ್ಲೇಗ್ ರೋಗದ ನಿವಾರಣೆಯ ಸಂಕೇತವಾಗಿ ಕಟ್ಟಿಸಿದ. ಇದು 50 ಮೀಟರ್ ಎತ್ತರವಿದ್ದು ಕಲ್ಲು ಮತ್ತು ಗಾರೆಯಿಂದ ನಿರ್ಮಿಸಲಾಗಿದೆ. ಈ ಪ್ರದೇಶ ಅತ್ಯಂತ ಜನ ಸಂದಣಿಯಿಂದ ಕೂಡಿದೆ. ಚಾರ್‍ಮಿನಾರ್ ಪಕ್ಕದಲ್ಲಿರುವ ಮಕ್ಕಾಮಸೀದಿ ಪ್ರಪಂಚದಲ್ಲಿಯೇ ದೊಡ್ಡದಾದ ಮಸೀದಿಗಳಲ್ಲೊಂದು. ಇಲ್ಲಿ 10,000ಕ್ಕೂ ಹೆಚ್ಚು ಜನರು ಒಂದೇ ಬಾರಿಗೆ ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಈ ಮಸೀದಿಯ ನಿರ್ಮಾಣದ ಕೆಲಸ ಮಹ್ಮದ್‍ಕ್ವಾಲಿಷಾ ಆಳ್ವಿಕೆಯಲ್ಲಿ ಪ್ರಾರಂಭವಾಗಿ 1687ರಲ್ಲಿ ಪೂರ್ಣಗೊಂಡಿತು. 1400 ಎತ್ತುಗಳಿಂದ 10ಕಿಮೀ ದೂರದಿಂದ ಗ್ರಾನೈಟ್ ಕಲ್ಲುಗಳನ್ನು ತಂದು ಕಟ್ಟಲಾಯಿತೆನ್ನುವರು. ಹೈದರಾಬಾದ್ ನಗರದಿಂದ 10ಕಿಮೀ ಪಶ್ಚಿಮಕ್ಕೆ ಗೋಲ್ಕೊಂಡ ಕೋಟೆಯ ಅವಶೇಷಗಳು ಇವೆ. ಬೆಟ್ಟದ ಮೇಲೆ ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾದ ಈ ಕೋಟೆ ಹಲವಾರು ವರ್ಷಗಳ ವರೆಗೆ ವಜ್ರಗಳ ಮಾರಾಟ ಕೇಂದ್ರವೂ ಮತ್ತು ಆಡಳಿತ ಕೇಂದ್ರವೂ ಆಗಿತ್ತು. ಗೋಲ್ಕೊಂಡ ಕೋಟೆ ಸು. 1500-1600ರಲ್ಲಿ ದೊರೆ ಕುತುಬ್‍ಷಾಹಿ ರಾಜನಿಂದ ನಿರ್ಮಿಸಲಾದರೂ ಅದಕ್ಕೂ ಹಿಂದೆ ಹಿಂದೂ ರಾಜರ ಕಾಲದಲ್ಲಿಯೂ ಇದು ಇತ್ತೆಂಬುದಕ್ಕೆ ಕೆಲವು ಪುರಾವೆಗಳಿವೆ. ಅತ್ಯಂತ ಸುಂದರವಾದ ಬಿರ್ಲಾ ಮಂದಿರ ಆಧುನಿಕ ಹಿಂದೂ ದೇವಾಲಯ ಹುಸೇನ್ ಸಾಗರದ ಹತ್ತಿರವಿದೆ.

	ಹೈದರಾಬಾದ್ ನಗರ ಈಗ ಹೆಚ್ಚಿನ ಜನ ಸಾಂದ್ರತೆಯನ್ನು ಹೊಂದಿದೆ. ಇಲ್ಲಿ ಅನೇಕ ವಸ್ತುಸಂಗ್ರಹಾಲಯಗಳು, ಶಾಲಾ ಕಾಲೇಜುಗಳಿವೆ. ಇಲ್ಲಿ ಕಂಡು ಬರುವ ಮೂರು ವಿಶ್ವವಿದ್ಯಾಲಯಗಳಲ್ಲಿ ಉಸ್ಮಾನಿಯ ವಿಶ್ವವಿದ್ಯಾನಿಲಯ ಮುಖ್ಯವಾದುದು. ಅಲ್ಲದೇ ಅಬ್ದುಲ್‍ಕಲಂ ಆಜಾದ್ ಓರಿಯಂಟಲ್, ಸಂಶೋಧನಾ ಸಂಸ್ಥೆ, ಏಷ್ಯ ಅಧ್ಯಯನ ಸಂಸ್ಥೆ, ಹೆನ್ರಿಮಾರ್ಟನ್ ಇಸ್ಲಾಂ ಅಧ್ಯಯನ ಸಂಸ್ಥೆಗಳು ಮುಖ್ಯವಾದುವು. ಹಾಗೂ ಗ್ರಂಥಾಲಯಗಳಲ್ಲಿ ಕೇಂದ್ರ ಗ್ರಂಥಾಲಯ ಮತ್ತು ಹಸ್ತಪ್ರತಿ ಗ್ರಂಥಾಲಯಗಳು ಮುಖ್ಯವಾಗಿ ಕಂಡು ಬರುತ್ತವೆ.

	ಹೈದರಾಬಾದ್ ನಗರದ ಆರ್ಥಿಕತೆಯು ಮುಖ್ಯವಾಗಿ ವ್ಯಾಪಾರವನ್ನು ಅವಲಂಬಿಸಿದೆ. ಇಲ್ಲಿ ಕಂಡು ಬರುವ ಮುಖ್ಯ ಕೈಗಾರಿಕೆಗಳೆಂದರೆ; ಗಾಜಿನ ಸಾಮಾನು, ಬಂದೂಕು, ಕಾಗದ ಮತ್ತು ಬಟ್ಟೆಗಳನ್ನು ತಯಾರಿಸುವ ಕೈಗಾರಿಕೆಗಳಿವೆ. ಇಲ್ಲಿ ಮುಖ್ಯವಾದ ನಾಲ್ಕು ಕೈಗಾರಿಕಾವಲಯಗಳು ಕಂಡು ಬರುತ್ತವೆ-ಅಹಮದಾಬಾದ್ ರಾಸಾಯನಿಕ ವಸ್ತು ಮತ್ತು ಸಿಗರೇಟನ್ನು ಉತ್ಪಾದಿಸಿದರೆ. ಸನತ್‍ನಗರ ಮತ್ತು ಕೋಜತ್ ಪಲ್ಲಿಯಲ್ಲಿರುವ ಕೈಗಾರಿಕೆಗಳು ಲೋಹದ ಕೆಲಸ, ಗಡಿಯಾರ ಮತ್ತು ರಿಫ್ರೆಜರೇಟರ್‍ಗಳನ್ನು ತಯಾರಿಸುತ್ತದೆ. ಮೌಲಆಲಿ ಮತ್ತು ನಚರಾಮ್‍ನಲ್ಲಿ ವಿಶೇಷವಾಗಿ ಬಿಸ್ಕತ್ತು, ರಾಸಾಯನಿಕ ವಸ್ತುಗಳು ಮತ್ತು ಔಷಧಿವಸ್ತುಗಳನ್ನು ತಯಾರಿಸುತ್ತದೆ. ಬೃಹತ್ ವಿದ್ಯುತ್ ಉಪಕರಣಗಳು ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ರಾಮಚಂದ್ರಪುರಂನಲ್ಲಿ ಉತ್ಪಾದಿಸುತ್ತಾರೆ.

	ಹೈದರಾಬಾದ್ ಪಟ್ಟಣವು 1919ರಲ್ಲಿ ಕೇವಲ 170ಚಕಿಮೀ ವಿಸ್ತೀರ್ಣವನ್ನು ಹೊಂದಿತ್ತು ಹಾಗೂ ಅರ್ಧ ದಶಲಕ್ಷಜನರಿದ್ದರು. ಆದರೆ ಪಟ್ಟಣ ಪ್ರದೇಶದ ಕಡೆ ಜನರು ವಲಸೆ ಬಂದ ಪ್ರಯುಕ್ತ ವಸತಿಗಳ ತೊಂದರೆಯಾಗಿ 1975ರಲ್ಲಿ ಮಾದರಿ ಯೋಜನೆ ಮೂಲಕ ನಗರದ ವಿಸ್ತೀರ್ಣವು 562ಚಕಿಮೀ ವಿಸ್ತಾರವಾಯಿತು ಹಾಗೂ ಇದು ಮೂರನೆಯ ಸಂರಕ್ಷಿತ ಹಸಿರು ವಲಯದ ಪಟ್ಟಣವಾಗಿದ್ದು, ವಸತಿವಲಯವು, ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಂದ ಬೇರ್ಪಟ್ಟಿತು. ಮೂಸೀನದಿಗೆ ಅನೇಕ ಸೇತುವೆಗಳು ನಿರ್ಮಾಣಗೊಂಡವು. ಹೈದರಾಬಾದ್ ಹಳೆನಗರ, ಹೊಸನಗರ ಎರಡೂ ಇಂದು ಆಧುನಿಕರೀತಿಯಲ್ಲಿ ವಿಸ್ತರಿಸುತ್ತಲೇ ಇವೆ.

	ಹಳೆ ಹೈದರಾಬಾದಿನ ಪ್ರದೇಶದಲ್ಲಿರುವ ಹಿಂದಿನ ಮಸೀದಿ ಮತ್ತು ಗೋರಿಗಳನ್ನು, ದೇವಸ್ಥಾನಗಳನ್ನು, ಕೋಟೆ ಕೊತ್ತಲಗಳನ್ನು ಇನ್ನೂ ಅನೇಕ ವಿಧವಾದ ಐತಿಹಾಸಿಕ ವಸ್ತುಗಳನ್ನು ಸ್ಥಳಗಳನ್ನು ಭಾರತ ಪುರಾತತ್ತ್ವ ಸಂರಕ್ಷಣಾಇಲಾಖೆ ಮತ್ತು ಆಂಧ್ರಪ್ರದೇಶ ರಾಜ್ಯ ಸರ್ಕಾರ ರಕ್ಷಿಸುವ ಕಾರ್ಯಮಾಡುತ್ತಿವೆ. ಇವುಗಳಲ್ಲಿ ಹೆಚ್ಚಿನವು ಕುತುಬ್‍ಷಾಹಿ ಕಾಲದವು. ಗೋಲ್ಕೊಂಡ ಕೋಟೆಯ ಅವಶೇಷಗಳು, ರಾಜರಾಣಿಯರ ಗೋರಿಗಳು 78ವರ್ಷಗಳ ಧೀರ್ಘಕಾಲವನ್ನು ತೆಗೆದುಕೊಂಡು ನಿರ್ಮಿಸಿದ ಮೆಕ್ಕಾಮಸೀದಿ ಭಾರತದಲ್ಲಿ ಅತ್ಯಂತ ದೊಡ್ಡದಾದ ಮಸೀದಿಗಳಲ್ಲಿ ಎರಡನೆಯದೂ ಪ್ರಪಂಚದಲ್ಲಿ 7ನೆಯದೂ ಆಗಿದೆ. ಚಾರ್‍ಮಿನಾರ್‍ನ ದಕ್ಷಿಣಕ್ಕೆ 4 ಕಿಮೀ ದೂರದಲ್ಲಿ 19ನೆಯ ಶತಮಾನದಲ್ಲಿ ವಿಕರ್‍ಉಲ್ ಉಮ್ರ ಆಗಿನ ಹಣ 4,00,000 ರೂಪಾಯಿಗಳನ್ನು ವ್ಯಯಿಸಿ ಕಟ್ಟಿಸಿದ ಭವ್ಯವಾದ ಫಲಕ್ನೂಮ ಅರಮನೆಯಿದೆ. ಈ ಅರಮನೆಯನ್ನು ಹೈದರಾಬಾದಿನ 6ನೆಯ ನಿಜಾóಮ ಮೆಹಬೂಬ್ ಅಲಿ ಪಾಸ ಕೊಂಡುಕೊಂಡನು. 1592 ಮತ್ತು 1596ರ ಮಧ್ಯೆ ನದಿಗೆ ಹತ್ತಿರದಲ್ಲೆ ಕಟ್ಟಿದ ಬಾದಶಾಹಿ ಅಸುರ್‍ಖಾನ, ಜೂಬಿಲಿ ಬೆಟ್ಟದ ಮೇಲೆ ಅಪೊಲೊ ಆಸ್ಪತ್ರೆ ಬಳಿ ಇರುವ ಹಕೀಂಗೋರಿ, ಮುಸಿರಾಬಾದಿನಲ್ಲಿರುವ (1627-72) ಅಬ್ದುಲ್ಲಾ ಕುತುಬ್‍ಷಾ ಕಟ್ಟಿದ ಮಸೀದಿ ಇವೆಲ್ಲ ನೋಡುವಂತಹ ಸ್ಥಳಗಳು. ಹೈದರಾಬಾದಿನ ನಿಜಾಮರ ಪ್ರಸಿದ್ಧ ವಸ್ತು ಸಂಗ್ರಹಾಲಯದಲ್ಲಿರುವ ವಸ್ತುಗಳು ಪ್ರಪಂಚದ ವಿವಿಧ ದೇಶಗಳಿಂದ ವಿವಿಧ ಕಾಲದಲ್ಲಿ ಬಂದವುಗಳು. ಬಹು ಆಮೂಲ್ಯವಾದವುಗಳು, ಮುತ್ತು, ರತ್ನ, ವಜ್ರ ವೈಡೂರ್ಯಗಳ, ಚಿನ್ನಾಭರಣಗಳ ವ್ಯಾಪಾರ ಭರಾಟೆ ಮೊದಲಿಂದಲೂ ಇಲ್ಲಿ ಇರುವುದೇ ಆಗಿದೆ.				
	(ಎಚ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ